ಕೀತ್, ಎ ಬಿ

1879-1944. ಸಂಸ್ಕøತ ಸಾಹಿತ್ಯಕ್ಷೇತ್ರದಲ್ಲಿ ಗಣ್ಯ ಕೆಲಸ ಮಾಡಿರುವ ಹಿರಿಯ ವಿದ್ವಾಂಸರಲ್ಲೊಬ್ಬ. ಆರ್ಥರ್ ಬೆರಿಡೇಲ್ ಕೀತ್ ಎಂಬುದು ಪೂರ್ಣನಾಮ. ಇಂಗ್ಲೆಂಡಿನ ಎಡಿನ್‍ಬರೋ ಹತ್ತಿರ ಜನ್ಮವೆತ್ತಿದ ಈತ 1897ರಲ್ಲಿ ಅಲ್ಲಿನ ವಿಶ್ವವಿದ್ಯಾಲಯದಿಂದ ಪುರಾತನ ಭಾಷೆಗಳಲ್ಲಿ ಪ್ರಥಮ ದರ್ಜೆ ಆನ್ಸರ್ ಪದವಿ ಪಡೆದು ಎಂ.ಎ. ಪದವೀಧರನಾದ.

 ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದ ಬ್ಯಾಲಿಯೋಲ್ ಕಾಲೇಜಿನಲ್ಲಿ ಬೋಡೆನ್ ಸಂಸ್ಕøತ ವಿದ್ಯಾರ್ಥಿವೇತನ ದೊರಕಿತಾಗಿ ಪುರಾತನ ಭಾಷಾವಿಷಯದಲ್ಲಿ ಅಲ್ಲೂ ಪ್ರಥಮಸ್ಥಾನ ಗಳಿಸಿಕೊಂಡ (1899). ಭಾರತೀಯ ಲೋಕ ಸೇವಾ ಪರೀಕ್ಷೆಯಲ್ಲಿ ಹಿಂದಿನ ಎಲ್ಲ ವರ್ಷಗಳ ಪ್ರಥಮ ಅಭ್ಯರ್ಥಿಗಳಿಗಿಂತಲೂ ಒಂದು ಸಹಸ್ರ ಅಂಕಗಳನ್ನೂ ಹೆಚ್ಚಿಗೆ ಪಡೆದು, ಬಾಲ್ಯದಿಂದಲೂ ಬೆಳೆಸಿಕೊಂಡು ಬಂದಿದ್ದ ಮೇಧಾಶಕ್ತಿಯನ್ನು ತೋರ್ಪಡಿಸಿ, ವಿಜಯಿಯಾದ. ಈ ಮೇಧಾವಿಯ ದಪ್ಪತಲೆ, ದೃಢಕಾಯ ಒಳಗಿನ ಅಂತಸ್ಸತ್ತ್ವವನ್ನು ಘೋಷಿಸುವಂತಿದ್ದುವು.

 1901ರಲ್ಲಿ ವಿದೇಶೀ ಸ್ವಾಸ್ಥ್ಯಗಳ ಕಚೇರಿಗೆ ಸೇರಿದ. ಅಲ್ಲಿ ಕೆಲಸದಲ್ಲಿದ್ದುಕೊಂಡೇ 1904ರಲ್ಲಿ ಲಾ ಪರೀಕ್ಷೆಯಲ್ಲಿ ಪ್ರಥಮದರ್ಜೆಯಲ್ಲಿ ತೇರ್ಗಡೆಯಾದ. ಬೃಹದ್ ಗ್ರಂಥಗಳ ಸೃಷ್ಟಿಗೆ ಕೈಹಾಕಿ ತನ್ನ ಅಸಾಧಾರಣ ಪ್ರತಿಭೆ, ಮೇಧಾಶಕ್ತಿ ಮತ್ತು ಜ್ಞಾಪಕಶಕ್ತಿಯನ್ನು ಸದುಪಯೋಗಪಡಿಸಿಕೊಂಡು ಸುಮಾರು ನಲವತ್ತು ವರ್ಷಗಳ ಕಾಲ ಸತತವಾಗಿ ಸಂಸ್ಕøತ ಸಾಹಿತ್ಯಕ್ಕೂ ಬ್ರಿಟಿಷರ ರಾಜ್ಯವ್ಯವಸ್ಥೆಯ ಕಾಯಿದೆಗೂ ಸಂಬಂಧಿಸಿದಂತೆ ಅನೇಕ ಗ್ರಂಥಗಳನ್ನು ಈತ ರಚಿಸಿದ.

 ಕೀತ್ ವೈದಿಕ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಋಗ್ವೇದದ ಐತರೇಯಾರಣ್ಯಕ, ಶಾಂಖಾಯನ ಅರಣ್ಯಕ, ಋಗ್ವೇದದ ಬ್ರಾಹ್ಮಣಗಳು, ಕೃಷ್ಣಯಜುರ್ವೇದೀಯ ತೈತ್ತಿರೀಯ ಸಂಹಿತೆ-ಇವನ್ನು ಸಂಪಾದಿಸಿದ್ದಾನೆ. ಇಲ್ಲವೆ ಭಾಷಾಂತರಿಸಿದ್ದಾನೆ. ವೇದ ಮತ್ತು ಉಪನಿಷತ್ತುಗಳ ಧರ್ಮ ಮತ್ತು ದರ್ಶನ ಎಂಬ ಎರಡು ಭಾಗಗಳನ್ನು ವಿಮರ್ಶಾರೂಪದಲ್ಲಿ ಪ್ರಕಟಿಸಿದ್ದಾನೆ. ಮೆಕ್ ಡೊಗಲ್ ಜೊತೆ ವೈದಿಕ ಅಭಿದಾನ ಮತ್ತು ವಿಷಯಸೂಚಿ ಎಂಬ ಬೃಹದ್ ಗ್ರಂಥವೊಂದನ್ನು ರಚಿಸಿದ್ದಾನೆ.

 ಸಾಂಖ್ಯದರ್ಶನ, ಭಾರತೀಯ ತರ್ಕಶಾಸ್ತ್ರ ಮತ್ತು ಅಣುವಾದ, ಕರ್ಮಮೀಮಾಂಸೆ, ಬೌದ್ಧದರ್ಶನಗಳು-ಇವು ಕೀತ್ ರಚಿತ ತತ್ತ್ವಶಾಸ್ತ್ರ ಗ್ರಂಥಗಳು. ಸಂಸ್ಕøತನಾಟಕ ಮತ್ತು ಸಂಸ್ಕøತ ಸಾಹಿತ್ಯ ಚರಿತ್ರೆ ಎಂಬಿವು ಈತನ ಇನ್ನೆರಡು ಬೃಹದ್ ವಿಮರ್ಶಾಗ್ರಂಥಗಳು.

 ಕೇವಲ ಮೂವತ್ತು ವರ್ಷ ವಯಸ್ಸಿನಲ್ಲೇ ಆಕ್ಸ್‍ಫರ್ಡಿನಲ್ಲಿ ಬೋಡೆನ್ ಸಂಸ್ಕøತ ಉಪಪ್ರಾಧ್ಯಾಪಕನಾದ ಕೀತ್ ಮೂವತ್ತೈದನೆಯ ವಯಸ್ಸಿನಲ್ಲಿ (1914) ಎಡಿನ್‍ಬರೊನಲ್ಲಿ ಸಂಸ್ಕøತ ಮತ್ತು ತುಲನಾತ್ಮಕ ಭಾಷಾಶಾಸ್ತ್ರದ ಪ್ರಾಧ್ಯಾಪಕನಾದ. ವಿಂಟರ್‍ನಿಟ್ಸ್ ಮತ್ತು ಜೌಫ್ರೆಚ್‍ರವರಂಥ ಮಹಾಮೇಧಾವಿಗಳ ಜೊತೆಯಲ್ಲಿ ಆಕ್ಸ್‍ಫರ್ಡಿನ ಬೋಡ್‍ಲಿಯನ್ ಪುಸ್ತಕ ಭಂಡಾರದಲ್ಲಿದ್ದ ಸಂಸ್ಕøತ ಮತ್ತು ಪ್ರಾಕೃತ ಹಸ್ತಪ್ರತಿಗಳ ಸೂಚಿಯನ್ನು ತಯಾರಿಸಿದ (1905).

 ಇಂಥ ಉದ್ದಾಮ ಪಂಡಿತನೂ ವಿಮರ್ಶಕನೂ ಆದ ಕೀತ್‍ಗೆ ಆಕ್ಸ್‍ಫರ್ಡ್, ಎಡಿನ್‍ಬರೊ ಮತ್ತು ಲೀಡ್ಸ್ ವಿಶ್ವವಿದ್ಯಾಲಯಗಳು ಡಾಕ್ಟರೇಟ್ ಪ್ರಶಸ್ತಿಯನ್ನಿತ್ತು ಗೌರವಿಸಿದವು. ಕೊವೆಲ್, ಮೆಕ್‍ಡೊನೆಲ್ ಮತ್ತು ಕೀತ್ ಈ ಮೂವರು ಸಂಸ್ಕøತ ಸಾಹಿತ್ಯರತ್ನಮಾಲೆಗೆ ಇಂಗ್ಲೆಂಡಿತ್ತ ರತ್ನತ್ರಯರೆಂದು ಪ್ರಸಿದ್ಧರಾಗಿದ್ದಾರೆ. 

(ಸಿ.ಜಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ